ಸುಮಕೋಗಿಲೆ
ಹೇ ಸುಮವೆ , ನಿನಗೇಕೆ ಈ ಗೊಡವೆ,
ಸ್ವಚ್ಛಂದದ ಬಾನಲ್ಲಿ ಮನದ ರೆಕ್ಕೆ ಬಿಚ್ಚಿ
ಮುಗಿಲೆತ್ತರಕ್ಕೆ ಹಾರಿ ಹಾಡುತ್ತಿದ್ದ ಕೋಗಿಲೆ ನೀನು ।।
ಮುಖದ ಭಾವದ ಮುದುರಿಸಿ,
ಮನದ ಹಾವವ ಘಾಸಿಗೊಳಿಸಿ ,
ರೆಕ್ಕೆ ಬಿಚ್ಚದೆ ಕೈ ಸೋತು ಕುಳಿತಿರುವೆ ಏಕೆ ।।
ಬಾನಲ್ಲಿ ಎದುರಾದ ಗಿಡುಗನ ಭಯವೆ,
ಜೊತೆಗೆ ಹಾರದ ನವಿಲಿನ ಗೊಡವೆಯೆ ,
ಇಲ್ಲ ಸ್ವಚ್ಛಂದದ ಬಾನಲ್ಲಿ ಕಾಣದ ಗುರಿಯ ಹುಡುಕಾಟವೆ ।।
ಹೇಳೆ ಕೋಗಿಲೆ ಏನು ನಿನ್ನ ಆತಂಕದ ಆಧಾರ,
ಏಕೀ ನಿನ್ನ ತೊಳಲಾಟ , ಬಿಚ್ಚು ನಿನ್ನ ಸಂತಸದ ರೆಕ್ಕೆಗಳ,
ಹಾರು , ನೀ ಹಾರು ಸ್ವಚ್ಛಂದವಾಗಿ ಬಾಳ ಬಾನಲ್ಲಿ ।।
ನೀ ಯಾರಿಗೂ ಕಾಯುವವಳಲ್ಲ ,
ನಿನ್ನ ಉತ್ಸಾಹದ ಸುಗಂಧವ ಎಲ್ಲರಿಗೂ ,
ಹಂಚುವ ಸುಮವು ನೀನು ,
ಈ ಸುಮ ಕೋಗಿಲೆಯು ಎಂದೂ ಬಾಡಬಾರದು ।।
ನವೀನಸ್ಪೂರ್ತಿ
0 comments:
Post a Comment