ಬೆಸುಗೆ
ಏ ಸುಂದರ ಇಬ್ಬನಿಯೆ , ಮುಂಜಾವಿನ ಮಂಜಿನ ಮಗುವೆ
ಸೂರ್ಯನ ಸಿಂಧುರಷ್ಮಿಯೇ ನಿನ್ನ ಮೈ ಬಣ್ಣ ,
ಬಾಗಿ ನಿಂದ ಬಳ್ಳಿಯ ಮೇಲೆ ವಜ್ರದ ಹರಳಿನಂತೆ ಹರಡಿ ನಿಂತಿರುವೆ,
ಆಹಾ ಎಷ್ಟು ಚೆಂದ ।।
ಹಸಿರು ಹಾಸಿನ ತುಂಬೆಲ್ಲಾ ಮೊಗ್ಗಾಗಿ ಅರಳುತ್ತಿರುವೆ ನೀ ,
ಸೂರ್ಯನ ಮಿಂಚನ್ನೆ ಆಗಿಸಿ ನಿನ್ನ ಹೂವಿನ ಬಣ್ಣ
ಹೂವೆಂದು ಕೀಳಲು ಹೋದರೆ ,ಕರಗಿ ಹರಿಯುವೆ ನೀನು,
ಇದೆಂಥ ಚೆಂದ ||
ಇದೆಂಥ ಚೆಂದ ||
ಸಂಪಿಗೆಯ ಮೈಯ ಮೇಲೆ ಮಿಂಚಿ ನಲಿಯುತ್ತಿರುವ, ನೀ ಇಬ್ಬನಿಯೆ,
ನೆತ್ತಿಗೆ ಬಂದಾಗ ಸೂರ್ಯ, ನೋಡಲಾರದೆ ನಿನ್ನ ಹೆದರಿಕೆಯ ಕಣ್ಣ,
ಓಡಿ ಬಂದು ಬಾಚಿ ತಬ್ಬಿತ್ತು ಗಾಳಿಯು
ನಡುಗಿ ಹೆದರಿದ ನಿನ್ನ ||
ನಡುಗಿ ಹೆದರಿದ ನಿನ್ನ ||
ಗಾಳಿಯ ಬಾಹುಬಂದನದಿಂದ ಬಿಡಿಸಿಕೊಂಡು ಹಿಂದೆ ಸರಿದೆ,
ನಾಚಿಕೆಯಿಂದ ರಂಗೇರಿತ್ತು ನಿನ್ನ ಕೆನ್ನೆಯ ಕಾಂತೀಯ ಬಣ್ಣ,
ನಾಚಿದರೂ, ಪೊಗರಿನಿಂದ ನಿಂಗೆಷ್ಟು ಧೈರ್ಯ, ಯಾರು ನೀನು ಎಂದು
ಕೇಳುವಾಗ ತೊದಲಿದೆ ನೀನು ||
ಕೇಳುವಾಗ ತೊದಲಿದೆ ನೀನು ||
ನಿನ್ನ ಕಣ್ಣಿನ ಮಿಂಚನ್ನು, ರಂಗಾದ ಕೆನ್ನೆಯ ನೋಡಿ,
ಹೇಳಿದ ಭೂಪ ಭೂಮಿ ಆಕಾಶವ ಒಂದು ಮಾಡುವವ ನಾನು,
ನಿನ್ನ ಕಾಂತಿಗೆ ಮನಸೋತು ಬಂದಿರುವೆ, ನಿನ್ನ ಪ್ರೇಮ ಭಿಕ್ಷೆ ಯ ನೀಡುವೆಯ ,
ಎಂದು ಕೇಳಿತ್ತು ಗಾಳಿಯು ||
ಎಂದು ಕೇಳಿತ್ತು ಗಾಳಿಯು ||
ಮೊದಲ ಭೇಟಿಗೆ ಸೋತರೂ, ಮರುಳಾಗದೆ ಹಿಂದೆ ಸರಿದಿದ್ದ ಇಬ್ಬನಿ,
ಮುಗುಳ್ನಕ್ಕು ತನ್ನ ಪ್ರೇಮ ಬಾಹುಗಳ ಚಾಚಿದ್ದಳು,
ಸಂತೋಷಕ್ಕೆ ಪಾರವೇ ಇಲ್ಲದ ಗಾಳಿಯು ,
ಮುಗಿಲಿಗೆ ಜಿಗಿದು ಕುಣಿದಾಡಿತ್ತು ||
ಮುಗಿಲಿಗೆ ಜಿಗಿದು ಕುಣಿದಾಡಿತ್ತು ||
ಮುಂಜಾವಿನ ಮಂಜಿನ ರಾಜ್ಯದ ರಾಜಕುಮಾರಿ ಇಬ್ಬನಿಗು,
ಶರವೇಗದ ಸರದಾರ ಗಾಳಿಗು ಸಂಭ್ರಮದಿ ಜರುಗಿತ್ತು ಮದುವೆ,
ಗಾಳಿಯ ಪಟ್ಟದರಸಿ ಇಬ್ಬನಿಯು, ಆವಿಯ ರೂಪತಾಳಿ,
ಗಾಳಿಯ ಊರು ಮೋಡಕ್ಕೆ ಹೊರಟು ನಿಂತಿತ್ತು ।।
ಗಾಳಿಯ ಊರು ಮೋಡಕ್ಕೆ ಹೊರಟು ನಿಂತಿತ್ತು ।।
ಪ್ರಕೃತಿ ಯೇ ಮೈದುಂಬಿ ಹೊಸ ಜೋಡಿಗೆ ಹರಸಿ ಕಳಿಸಿತ್ತು.....
ನವೀನ
ಇಬ್ಬನಿಯ ಪ್ರೇಮ ಕಾವ್ಯದ ಮುಂದಿನ ಭಾಗ ಎದುರು ನೋಡುತ್ತಿರಿ...
nice
ReplyDelete