ಭಾವನೆ ಏಕೆ ಕೇವಲ ಜೀವಿಗಳಿಗೆ ಮಾತ್ರ ಇರಬೇಕು, ಜೀವವು ಒಣಗಿದ್ದರು , ಮತ್ತೊಂದು ಜೀವಕೆ ಆಸರೆಯಾಗಿ ಬಾಳುವ ಒಂದು ಒಣ ಹುಲ್ಲಿನಿಂದಾದ ಹಕ್ಕಿ ಗೂಡಿನ ಸೂಕ್ಷ್ಮ ಸಂವೇದನೆಗಳನ್ನು , ಈ ಕವನದ ಮೂಲಕ ಸೆರೆಹಿಡುಯುವುದು ನನ್ನ ಉದ್ದೇಶವಾಗಿತ್ತು. ಇದೆಷ್ಟು ಸಮಂಜಸ ಎಂಬುದು ತರ್ಕಕ್ಕೆ ನಿಲುಕದ್ದು .
ಹಕ್ಕಿ ಬಿಟ್ಹೋದ ಗೂಡು
ತಂಗಾಳಿಯಲ್ಲಿ ಓಡಾಡುತಿದ್ದ ನನ್ನ ,
ಗೂಡೊಂದು ಕರೆದು ಮಾತಾಡಿಸಿತ್ತು ।।
ಮುದ್ದಾದ ಗಿಡದ ಎಳೆ ಎಳೆಯ ಚಿಗುರಲ್ಲಿ ,
ಹಸಿರಿಲ್ಲದ ಗೂಡೊಂದು ಮಾತಾಡಿಸಿತ್ತು ।।
ಬಹುದಿನದ ಮೌನದಿ ಮರಗಟ್ಟಿದ ಗೂಡು ,
ಮುತ್ತಿನ ಮಣಿಯಂತೆ ಮಾತಾಡಿತ್ತು ।।
ಮಲ್ಲಿಗೆಯ ಗಿಡದಲ್ಲಿ ಗೀಜಗವು ಕಟ್ಟಿದ ಗೂಡು ,
ನನ್ನನ್ನು ನೋಡಿ ಒಂದು ಮಾತಾಡಿತ್ತು ।।
ಮಾತಾಡಿತ್ತು ಗೂಡು ಮಾತಾಡಿತ್ತು
ಮೌನ ಮುರಿದ ಗೂಡಿಂದು ಮಾತಾಡಿತ್ತು ।ಪ।
ತೆನೆಯ ನಾರು ತಂದಿತ್ತು ,
ತೆಂಗಿನ ಗರಿ ಹರಿದಿತ್ತು
ನೋಡು ನೋಡುತ್ತಲೇ ಒಂದು ಗೂಡಾಗಿತ್ತು ।।
ಹಿಂಡು ಹಿಂಡಾಗಿ ಗಿಡುಗ ,
ಹುಡುಕಿ ಬಂದರೂ ಬೆಚ್ಚಗಿನ
ನಿದ್ದೆ ಮಾಡುವ ಸುಂದರ ಬೀಡಾಗಿತ್ತು ।।
ಚಿಟ ಪಟನೆ ಮಳೆ ಹನಿಯು ,
ತೋಯ್ದು ನೀರಾಗಿಸಿದರೂ
ಹಕ್ಕಿಯ ನೆನೆಸದೆ ಕಾಪಾಡಿತ್ತು ।।
ಮಾತಾಡಿತ್ತು ಗೂಡು ಮಾತಾಡಿತ್ತು
ಎಂದೂ ಮರೆಯದ ಒಂದು ಮಾತಾಡಿತ್ತು ।ಪ।
ಹಕ್ಕಿಯ ಒಡಲಲ್ಲಿ ಮೊಟ್ಟೆಯೊಂದು ಮೂಡಿತ್ತು ,
ಗೂಡನ್ನು ನಂಬಿ ಗೀಜಗ ಅಲ್ಲೇ ಬಿಟ್ಟು ಹೋಗಿತ್ತು ।।
ಹಕ್ಕಿಯ ಮೊಟ್ಟೆಯು ಗೀಜಗದ ಹೊಟ್ಟೆಯಿಂದ
ಗೂಡಿನ ಮಡಿಲೊಳಗೆ ಸೇರಿ ಹೋಗಿತ್ತು ।।
ಹಕ್ಕಿಗೂ ಸೇರಿ ,ಮೊಟ್ಟೆಗೂ ತಾನೇ
ಪ್ರೀತಿಯಿಂದ ಗೂಡು ಕಾವು ಕೊಟ್ಟಿತ್ತು ।।
ಮಾತಾಡಿತ್ತು ಗೂಡು ಮಾತಾಡಿತ್ತು
ಅರಿವಿಗೇ ಜೀವ ತಂದ ಒಂದು ಮಾತಾಡಿತ್ತು ।ಪ।
ಸಂತಸದ ದಿನವಿಂದು ಮೊಟ್ಟೆಯಿಂದ
ಜೀವವು ಹೊರಗೆ ಬಂದಿತ್ತು ।।
ಮಕ್ಕಳನ್ನು ಸಂತೈಸುತಿದ್ದ ಗೂಡಿಗೆ , ಹಕ್ಕಿಯು
ಗುಟುಕನ್ನು ನೀಡಿ ಸಹಾಯ ಮಾಡುತಿತ್ತು ।।
ಮತ್ತೊಂದು ದಿನವೇಕೋ ಗೀಜಗದ ಹಕ್ಕಿಯು ,
ತನ್ನ ಮಕ್ಕಳೊಂದಿಗೆ ಏಕೋ ಹಾರಿಹೋಗಿತ್ತು ।।
ಮಕ್ಕಳನ್ನು ಕಳೆದುಕೊಂಡ ಗೂಡು ,
ಮತ್ತೆ ಅವರನ್ನು ನೋಡಲು ,
ಇಂದಿಗೂ ಅಲ್ಲೇ ಕಾಯುತ್ತಿತ್ತು ।।
ದೇವಕೆಗೆ ಹುಟ್ಟಿದರೂ ಕೃಷ್ಣನಿಗೆ ಯಶೋದೆ
ತಾಯಲ್ಲವೆ ಎಂದು ಕೇಳುತಿತ್ತು ।।
ನವೀನ
0 comments:
Post a Comment