ಒಲವಿನ ಸುರಿಮಳೆ
ಇಳೆಯಿಂದು ಬತ್ತಿತ್ತು ಮೋಡದ ಒಲವು ಕಾಣದೆ
ಬಿಸಿಯುಸಿರ ಬಸಿದಿತ್ತು ವಿರಹದ ಬೇಗೆ ತಾಳದೆ ,
ಎಂದಿಗೆ ತುಂತುರು ಬರುವುದೋ ಎಂದು ತುದಿಗಾಲಲ್ಲಿ ಕಾದಿತ್ತು
ಪ್ರೀತಿಯ ತಂಪು ಕಾಣದೆ ಬಿಸಿಲಲ್ಲಿ ಬಳಲಿತ್ತು ।।
ಬಯಕೆಯ ಬಯಲಲ್ಲಿ ಬಿತ್ತಿದ್ದ ಮೋಡವು
ಬಿರುಸು ಗಾಳಿಗೆ ಸಿಲುಕಿ ಚದುರಿತ್ತು
ಚದುರಿದ ಚಿತ್ತಾರವು ಚಿತ್ತವನ್ನೇ ಚಿದ್ರಿಸಿತ್ತು
ಒಲವಿಂದ ಅರಳಿದ್ದ ಹೂಗಳನ್ನೆಲ್ಲ ಬಾಡಿಸಿತ್ತು ।।
ಬಾಡಿದ್ದ ಹೂವಿನ ಮೇಲೆ ಬಿಂದುವೊಂದು ಮೂಡಿತ್ತು
ಮುಗಿಲ ತುಂಬಾ ಮುದ್ದಾದ ಮೋಡದ ಛಾಯೆ ಕವಿದಿತ್ತು
ವಿರಹವು ಕರಗುವ ಸದ್ದಿಗೆ ಪ್ರಕೃತಿಯೇ ನಡುಗಿತ್ತು
ಪ್ರೇಮದ ಮಿಂಚಿಗೆ ಕತ್ತಲೂ ಬೆಳಕಾಗಿತ್ತು ।।
ಸುರಿದಿತ್ತು ಒಲವಿನ ಮಳೆಯು ,
ದಿಕ್ಕರಿಸುವ ಗಾಳಿಯ ದಿಕ್ಕುತಪ್ಪಿಸಿ
ಇಳಿಯಿತು ಇಳೆಯ ಒಳಗೆ
ಪ್ರೀತಿಯ ತಂಪ ಇಳೆಯೆಲ್ಲ ಹಬ್ಬಿಸಿ ।।
ಇಳೆಯ ವಿರಹದ ಗೊಡವೆ ಒಡೆದು ಚೂರಾಗಿತ್ತು
ಪ್ರೀತಿಯ ತಂಪನ್ನು ಉಂಡ ಬಯಲೆಲ್ಲ ಹಸಿರಾಗಿತ್ತು
ಹಸಿರಾದ ಇಳೆಯ ತುಂಬ ಚೈತ್ರವು ಚಿಗುರೊಡೆದಿತ್ತು
ಪ್ರೀತಿಯ ಐಕ್ಯತೆಯ ಪ್ರಕೃತಿಯೇ ಮೈ ದುಂಬಿ ಆಚರಿಸಿತ್ತು ।।
ನವೀನ
Very Nice :)
ReplyDelete