ಬಾ ನನ್ನೆದೆಗೆ ಬಾ
ನೀ ಬರುವುದಾದರೆ ತೆರೆದೇ ಇರುವುದು
ನನ್ನ ಮನೆಯ, ಮನದ ಬಾಗಿಲು,
ಬರುವೆನೆಂದು ಬಾರದೇ ಇರಬೇಡ,
ಬರುವ ಆತುರದಲ್ಲಿ ಎಡವಿ ಬೀಳಬೇಡ ನೀ.।।
ಬಾ ಎಂದಿಗಾದರೂ ಬಾ,
ಎಂದಿಗೆ ಬಂದರೂ ಈ ಬಾಗಿಲು ತೆರೆದೇ ಇರುವುದು,
ಈ ಮನವು ಕಾಯುತ್ತಲೇ ಇರುವುದು ।।
ನೀ ಹೊರಟಿರುವ ದಾರಿಗೆ ಕತ್ತಲು
ಕವಿದಿದೆಯೆಂದು, ನೀ ಬಾರದೇ ಇರಬೇಡ.
ನಿನ್ನ ಹಾದಿಗೆ ಬೆಳಕಾಗಲು ನಾ ಚುಕ್ಕಿ
ಚಂದಿರನ ಕಳಿಸಿರುವೆ ।।
ನೀ ಬರುವೆನೆಂದು ಹೊರಟಿರುವ ಸಮಯದಿ
ಚಳಿ ಗಾಳಿಯೆಂದು, ನೀ ಬಾರದೇ ಇರಬೇಡ,
ನೀ ಹೊರಡುವ ಸಮಯ ಕಾಯ್ದು ಬೀಸೆಂದು
ನಾ ಚಳಿ ಗಾಳಿಗೆ ಮೊರೆಯಿಡುವೆನು ।।
ನೀ ಆರಿಸಿಕೊಂಡ ಹಾದಿಯಲ್ಲಿ ಕಲ್ಲು
ಮುಳ್ಳಿವೆಯೆಂದು, ನೀ ಅಲ್ಲೆ ನಿಲ್ಲಬೇಡ,
ಊರಿನ ಎಲ್ಲ ಹಾದಿಯಲ್ಲು ನಾ ಮುಳ್ಳಿಲ್ಲದ
ಹೂ ಹಾಸನ್ನು ಹಾಸಿರುವೆನು ।।
ನೀ ಹೊರಟು ನಿಂತಾಗ ಶಕುನದ
ಬೆಕ್ಕೊಂದು ಬಂತೆಂದು ನಿಟ್ಟುಸಿರು ಬಿಡಬೇಡ,
ಶಕುನ ಕಾಯುವ ಬೆಕ್ಕಿಗೆಲ್ಲ
ಶುಭ ಶಕುನದ ಗಂಟೆ ಕಟ್ಟಿರುವೆ. ।।
ನಿನ್ನ ಮನಸಿನಲ್ಲಿ ಗೊಂದಲ
ವಾಗಿದೆಯೆಂದು ಮನಸ್ಸು ಬದಲಿಸಬೇಡ,
ಗೊಂದಲದ ಗವಿಯಲ್ಲೆ ಪ್ರೇಮ ಜ್ಯೋತಿ
ಅರಳುವುದು, ಆ ಜ್ಯೊತಿಯ ಹಿಡಿದು ಬಾ. ।।
ಬಾ ನೀರೆ ಬಾರೆ ಬಾ, ಎಂದಿಗಾದರೂ ಬಾ,
ಬರುವೆನೆಂದು ನೀ ಬಾರದೆ ಇರಬೇಡ,
ನಿನ್ನ ಬರುವಿಕೆಯನ್ನು ಎದಿರು
ನೋಡುತ್ತಿರುವ ಮನಕೆ ಬಳುವಳಿಯಾಗಿ ಬಾ . . .
- ನವೀನ
0 comments:
Post a Comment