ಕನ್ನಡದ ಕಂಪು

by 20:19 0 comments

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂದ ಮಹಾ ಕವಿ ಕುವೆಂಪು ರವರಿಗೆ ಈ ನನ್ನ ಪುಟ್ಟ ಕವನ ಅರ್ಪಣೆ ... 


 ಕನ್ನಡದ ಕಂಪು 

ಏನೆಂದು ಹಾಡಲಿ ಕನ್ನಡದ ಕಂಪಿನ ಕಥೆಯ 
 ಹೊಗಳಲು ನಿಂತರೆ ಯುಗಗಳೆ ಕಳೆವುದು 
ಎಷ್ಟೆಂದು ಹೊಗಳಲಿ ಕರುನಾಡ ವೈಭವವ 
ಸಾವಿರ ನಾಲಗೆಯಲ್ಲಿ ಸಂವತ್ಸರಗಳೇ ನುಡಿದರೂ ,
ಮುಗಿಯದು ಮೊದಲ ಪರ್ವವೂ ।।

ಸಹ್ಯಾದ್ರಿಯ ಸುಂದರ ಝರಿಗಳ ಜುಳು ಜುಳು ನಾದಕ್ಕೆ 
ಗಿಳಿ ಕೋಗಿಲೆಗಳ ಚಿಲಿ ಪಿಲಿ ಗಾನವ ಕೂಡಿಸಿ ,
ಶ್ರೀ ಗಂಧದ ಸುಗಂಧವ ಬೆರೆಸಿ ,ತೇದು ಬಂದ ಅಮೃತ ಗಾನವೊಂದು ,
ಪದಗಳೊಡನೆ ಬೆರೆತು ,ಬಳುವಳಿಯಾಗಿ ಬಂದಿಹುದು ಕಸ್ತೂರಿ ಕನ್ನಡದ ರೂಪದಲ್ಲಿ  ।।

ನುಡಿವವರೆಲ್ಲಾ ಕವಿಗಳು ,ಈ ಇಂಪಿನ ನುಡಿಯ ,
ಕಲಿವವರೆಲ್ಲಾ ಕಲಿಗಳು ,ಈ ಕೆಚ್ಚೆದೆಯ ಭಾಷೆಯ ,
ಬರೆವವರೆಲ್ಲಾ ಭಾಗ್ಯವಂತರು , ಈ ಹೊನ್ನಿನ ಕನ್ನಡವ ,
ಈ ಮಣ್ಣಿನಲ್ಲಿ ಹುಟ್ಟಿದವರೆಲ್ಲರೂ ,ಮಹಾ ಪುಣ್ಯವಂತರು ।।

ನೆಲೆಸಿ ಹರಿದಾಡಿಹುದಿಲ್ಲಿ ,ಮಹಾ ಮಹಿಮರ ವಚನಗಳು ,
ಹರಸಿ ನೆಲಸಿಹರಿಲ್ಲಿ ,ಮುಕ್ಕೋಟಿ ದೈವಗಳು ,
ಹಾಡಿ ಕೊಂಡಾಡಿಹ ,ಕನಕ ಪುರಂದರ ಕೀರ್ತನೆಗಳು ,
ಹರಿಯುತಿವೆ ಇಂದಿಗೂ ,ಕೃಷ್ಣೆ ಕಾವೇರಿಯೊಡನೆ ।।

ಯುಗ ಯುಗಗಳೇ ಕಳೆದರೂ ,ಸೂರ್ಯ ಚಂದ್ರರೇ ಕಳವಾದರೂ ಕರಗದೀ ಕನ್ನಡ ,
ಬಿಚ್ಚುಗತ್ತಿಯ ಕೆಚ್ಚೆದೆಯ ಗಂಡುಗಲಿಗಳ ,ಸಚ್ಚರಿತ್ರೆ ಸಾರುತಿಹುದೀ ಕನ್ನಡ ,
ಭಂಡಾಯ ಬಂದವರ ಸೊಲ್ಲಡಗಿಸಿ ,ಭಂಡಾರದ ಬೀಡನ್ನು ,ಬಲಗೊಳಿಸುವ 
ಜಾಣರ ನೆಚ್ಚಿನ ಕನ್ನಡ ।।

ಸಾಟಿ ಏನು ಈ ನಲ್ಮೆಯ ಭಾಷೆಗೆ ,
ಸಾಲದಿನ್ನು ಸಹಸ್ರ  ಕವಿಗಳ ಸಂಯೋಜನೆ ,
ಇನ್ನು ಏಳೇಳು ಜನ್ಮದಲ್ಲೂ , ಈ ಮಣ್ಣಿನಲ್ಲೇ ನಾ ಜನಿಸಲೆಂದು 
ಆ ತಾಯಿ ಭುವನೇಶ್ವರಿಯಲ್ಲಿ ನನ್ನ ಸವಿನಯವಾದ ಪ್ರಾರ್ಥನೆ ।।

                                                ನವೀನಸ್ಪೂರ್ತಿ 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು..  

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment